ರಾಮಾನುಜನ್, ಶ್ರೀನಿವಾಸ
1887-1920. ಭಾರತದ ಪ್ರಸಿದ್ಧ ಗಣಿತವಿದ. ಕಿರಿವಯಸ್ಸಿನಲ್ಲೇ ಹಿರಿಪ್ರತಿಭೆಯನ್ನು ಪ್ರದರ್ಶಿಸಿದ ನಿಶಿತಮತಿ, ಜನಿಸಿದ್ದು (22 ಡಿಸೆಂಬರ್ 1887) ಆಗಿನ ಮದರಾಸು ಪ್ರಾಂತ್ಯದ ಈರೋಡ್‍ನಲ್ಲಿ. ತಂದೆ ಶ್ರೀನಿವಾಸ ಅಯ್ಯಂಗಾರ್, ತಂಜಾವೂರು ಜಿಲ್ಲೆಯ ಕುಂಭಕೋಣಮ್ಮಿನಲ್ಲಿಯ ಒಂದು ಬಟ್ಟೆ ಅಂಗಡಿಯಲ್ಲಿ ಗುಮಾಸ್ತರಾಗಿದ್ದವರು. ತಾಯಿ ಕೋಮಲತ್ತಮ್ಮಾಳ್. ಈರೋಡ್ ಈಕೆಯ ತವರೂರು. ಈಕೆಯ ತಂದೆ ಈರೋಡಿನ ಮುನ್ಸೀಫ್ ಕೋರ್ಟಿನಲ್ಲಿ ಅಮೀನರಾಗಿದ್ದವರು. ತಾಯಿ ರಂಗಮ್ಮಾಳ್, ನಾಯಕ್ಕಲ್ ಕ್ಷೇತ್ರದ ನಾಮಗಿರಿದೇವಿಯ ಪರಮಭಕ್ತೆ. ರಾಮಾನುಜನ್ನರ ತಂದೆ-ತಾಯಂದಿರಿಗೆ ಬಹಳ ಕಾಲದ ತನಕವೂ ಮಕ್ಕಳಾಗದಿದ್ದದ್ದರಿಂದ ನಾಮಗಿರಿ ದೇವಿಯನ್ನು ಆರಾಧಿಸಿ ಪುತ್ರನನ್ನು ಪಡೆದುಕೊಂಡರು. ಬಡತನ, ದೈವಭಕ್ತಿ ಮತ್ತು ಕಟ್ಟುನಿಟ್ಟಾದ ಸಂಪ್ರದಾಯಗಳೆಲ್ಲ ಈ ಶ್ರೀವೈಷ್ಣವ ಮನೆತನದಲ್ಲಿ ಬೆಸೆದುಕೊಂಡಿದ್ದವು.

ರಾಮಾನುಜನನ್ನು ಐದನೆಯ ವಯಸ್ಸಿನಲ್ಲಿ ಕುಂಭಕೋಣಮ್ಮಿನ ಪ್ರಾಥಮಿಕ ಶಾಲೆಗೆ ಸೇರಿಸಲಾಯಿತು (1892). ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಈತ ಬಲು ಚೂಟಿಯಾಗಿದ್ದು ತನ್ನ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಿದ್ದ. ಇಡೀ ತಂಜಾವೂರು ಜಿಲ್ಲೆಯಲ್ಲೇ ಪ್ರಥಮಸ್ಥಾನ ಗಳಿಸಿ ಉತ್ತೀರ್ಣನಾದ (1897). ಮುಂದೆ ಎರಡನೆಯ ಫಾರಮ್, ಮೂರನೆಯ ಫಾರಮ್ ತರಗತಿಗಳಲ್ಲಿ ವ್ಯಾಸಂಗ ಮಾಡುವಾಗಲೂ ಅಂಕಗಣಿತದಲ್ಲಿ ವಿಶೇಷ ಆಸಕ್ತಿ ವಹಿಸಿ ಎಷ್ಟೋ ವೇಳೆ ಅಲ್ಲಿಯ ಲೆಕ್ಕದ ಉಪಾಧ್ಯಾಯರಿಗೂ ಸವಾಲೆಸಗುವಂಥ ಪ್ರಶ್ನೆಗಳನ್ನು ಹಾಕಿ ಅವರನ್ನು ಚಕಿತಗೊಳಿಸುತ್ತಿದ್ದ. ಮುಂದೆ ಕುಂಭಕೋಣಮ್ಮಿನ ಶಾಲೆಯೊಂದರ ಮೂರನೆಯ ಫಾರಮ್ಮಿಗೆ ಈತನನ್ನು ಸೇರಿಸಲಾಯಿತು (1900). ವಯಸ್ಸಿಗೂ ತರಗತಿಗೂ ಮೀರಿದ ಇವನ ಅಮಿತ ಗಣಿತಾಸಕ್ತಿ ತ್ರಿಕೋನಮಿತಿ, ಬೀಜಗಣಿತ, ಜ್ಯಾಮಿತಿ ಮುಂತಾದ ಗಣಿತಶಾಖೆಗಳನ್ನು ಅಭ್ಯಸಿಸಲು ಎಡೆಮಾಡಿಕೊಟ್ಟಿತು. 1903ರಲ್ಲಿ ಈತ ಜಿ. ಎಸ್. ಕಾರ್ ಎಂಬ ಗಣಿತವಿದ್ವಾಂಸ ರಚಿಸಿದ್ದ ಸಿನೋಪ್‍ಸಿಸ್ ಆಫ್ ಪ್ಯೂರ್ ಮಾಥಮ್ಯಾಟಿಕ್ಸ್ ಎಂಬ ಪಠ್ಯಪುಸ್ತಕವನ್ನು ಎರವಲು ಪಡೆದುಕೊಂಡು ಅಭ್ಯಾಸ ಮಾಡಿದ್ದ. ತಾನು ಅಧ್ಯಯನ ಮಾಡಿದ್ದ ವಿಷಯಗಳನ್ನು ಕುರಿತು ಟಿಪ್ಪಣಿಮಾಡಿಕೊಂಡಿದ್ದ ತನ್ನ ಪುಸ್ತಕವನ್ನು ಆಸಕ್ತರಿಗೂ ತೋರಿಸುತ್ತಿದ್ದ. ಈ ಪುಸ್ತಕದಲ್ಲಿ ನಿರೂಪಿತವಾಗಿದ್ದ ವಿಷಯಗಳು ರಾಮಾನುಜನ್ನನ ಆಸಕ್ತಿಯನ್ನು ಕೆರಳಿಸಿ, ಉದ್ಭವಿಸುತ್ತಿದ್ದ ಸಮಸ್ಯೆಗಳನ್ನು ಕುರಿತು ಚಿಂತಿಸುತ್ತಿದ್ದಾಗ ಈತನ ಆರಾಧ್ಯದೈವ ನಾಮಗಿರಿದೇವಿ ಕನಸಿನಲ್ಲಿ ಕಾಣಿಸಿಕೊಂಡು ಗಣಿತಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದಳೆಂದು ಹೇಳಲಾಗಿದೆ.

ಯೋಚನಾಪರನೂ ಮಿತಭಾಷಿಯೂ ಆಗಿದ್ದ ರಾಮಾನುಜನ್ ತನ್ನ ಸಹಪಾಠಿಗಳೊಂದಿಗೆ ಹೆಚ್ಚಾಗಿ ಕಲೆಯುತ್ತಿರಲಿಲ್ಲ. ನಕ್ಷತ್ರಗಳ ದೂರವೆಷ್ಟು, ಗಣಿತದ ಅಂತಸತ್ತ್ವ ಯಾವುದು ಎಂದು ಮುಂತಾಗಿ ಪ್ರಶ್ನೆಗಳನ್ನು ಒಡನಾಡಿಗಳನ್ನು ಕೇಳುತ್ತಿದ್ದನಂತೆ. ಸೊನ್ನೆಯನ್ನು ಸೊನ್ನೆಯಿಂದ ಭಾಗಿಸಿದರೆ ಏನಾಗುತ್ತದೆ ಎಂಬಿತ್ಯಾದಿ ಮೂಲಭೂತ ಪ್ರಶ್ನೆಗಳನ್ನು ಉಪಾಧ್ಯಾಯರಿಗೆ ಹಾಕುತ್ತಲಿದ್ದನಂತೆ. 1903ರಲ್ಲಿ ಈತ ಆಗಿನ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿ 1904ರಲ್ಲಿ ಕುಂಭಕೋಣಮ್ಮಿನ ಸರ್ಕಾರಿ ಕಾಲೇಜಿಗೆ ಸೇರಿದ. ತನ್ನ ಏಕೈಕ ಆಸಕ್ತಿ ವಿಷಯ ಗಣಿತದ ಹೊರತು ಬೇರಾವ ವಿಷಯಕ್ಕೂ ಈತ ಗಮನ ಕೊಡಲೇ ಇಲ್ಲ. ಹೀಗಾಗಿ ಏಫ್. ಎ. ಪ್ರಥಮ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣನಾಗಲಿಲ್ಲ. ಈತನಿಗೆ ಲಭಿಸುತ್ತಿದ್ದ ವಿದ್ಯಾರ್ಥಿವೇತನವೂ ರದ್ದಾಯಿತು. ಒಂದೆಡೆ ಅನುತ್ತೀರ್ಣನಾದ ಮಾನಸಿಕ ಚಿಂತೆ, ಮತ್ತೊಂದೆಡೆ ಕಾಡುತ್ತಿದ್ದ ಬಡತನ. ಇವೆಲ್ಲ ಇವನ ಮನಸ್ಸಿಗೆ ಖೇದವನ್ನು ತಂದುಕೊಟ್ಟಿತ್ತಾದರೂ ರಾಮಾನುಜನ್ ತನ್ನ ಧೃತಿಯನ್ನು ಎಂದೂ ಕಳೆದುಕೊಂಡಿರಲಿಲ್ಲ.

ತನ್ನ ಸ್ನೇಹಿತರ ಒತ್ತಾಯದ ಮೇರೆಗೆ ರಾಮಾನುಜನ್ ಮದರಾಸು ನಗರಕ್ಕೆ ಬಂದರು (1906). ವಿದ್ಯಾಭ್ಯಾಸ ಮುಂದುವರಿಸಲು ಅಲ್ಲಿನ ಪಚ್ಚಯಪ್ಪ ಕಾಲೇಜಿಗೆ ಸೇರಿದರಾದರೂ ಎಫ್. ಎ. ಅಂತಿಮ ಪರೀಕ್ಷೆಯಲ್ಲಿ ಮಾತ್ರ ತೇರ್ಗಡೆಯಾಗುವುದು ಸಾಧ್ಯವಾಗಲಿಲ್ಲ. ಗಣಿತದ ವಿಷಯವೊಂದನ್ನು ಬಿಟ್ಟು ಮತ್ತೆಲ್ಲ ವಿಷಯಗಳೂ ಇವರಿಗೆ ಕೈಕೊಟ್ಟಿದ್ದುವು. ಹೀಗಾಗಿ ಪರೀಕ್ಷೆಗಳ ಯೋಚನೆಯನ್ನೂ ರಾಮಾನುಜನ್ ಕೈಬಿಟ್ಟಿದ್ದರು. ಕುಂಭಕೋಣ ಮತ್ತು ಮದರಾಸಿನ ಕಾಲೇಜುಗಳ ವಿದ್ವಾಂಸರಿಗೆ ಅರಳುತ್ತಿದ್ದ ರಾಮಾನುಜನ್ನರ ಪ್ರತಿಭೆ ಅರ್ಥವಾಗಿರಲಿಲ್ಲ. ಶುದ್ಧ ಗಣಿತದ ವಿವಿಧ ಶಾಖೆಗಳಲ್ಲಿಯ ಸಮಸ್ಯೆಗಳ ಫಲಿತಾಂಶಗಳನ್ನು ತಮ್ಮ ಟಿಪ್ಪಣಿ ಪುಸ್ತಕದಲ್ಲಿ ವ್ಯವಸ್ಥಿತವಾಗಿ ಗುರುತುಮಾಡಿಟ್ಟುಕೊಳ್ಳುತ್ತಿದ್ದರು.

1909ರಲ್ಲಿ ರಾಮಾನುಜನ್ ಜಾನಕಿ ಎಂಬವರನ್ನು ವಿವಾಹವಾದರು. ಆರ್ಥಿಕ ಭದ್ರತೆಯಾಗಲಿ ಉದ್ಯೋಗಾವಕಾಶವಾಗಲಿ ಅಗತ್ಯ ವಿದ್ಯಾರ್ಹತೆಯಾಗಲಿ ಇಲ್ಲದ ರಾಮಾನುಜನ್ ಅವರಿಗೆ ಸಂಸಾರದ ನಿರ್ವಹಣೆ ಮಾಡುವುದು ದುಸ್ಸಹವಾಯಿತು. ಈ ದಂಪತಿಗಳಿಗೆ ಮಕ್ಕಳಿರಲಿಲ್ಲವಾದರೂ ಗೃಹಸ್ಥರಾಗಿ ಬಾಳುವುದೇ ಬಲು ಕಷ್ಟವಾಯಿತು. ದೊರಕಿದ ತಾತ್ಕಾಲಿಕ ಹುದ್ದೆಗಳಿಂದ ಕೊಂಚಮಟ್ಟಿಗೆ ಸಾಂಸಾರಿಕ ಸಮಸ್ಯೆಗಳು ತಾತ್ಕಾಲಿಕವಾಗಿ ಪರಿಹಾರಗೊಂಡರೂ ಪೂರ್ಣ ಪರಿಹಾರ ಒದಗಲಿಲ್ಲ. ಇವರ ಪ್ರತಿಭೆ ಮತ್ತು ಬಡತನಗಳನ್ನು ಅರಿತಿದ್ದ ಇವರ ಸ್ನೇಹಿತನೊಬ್ಬನ ಸಲಹೆಯಂತೆ (1910) ಇಂಡಿಯನ್ ಮ್ಯಾಥಮ್ಯಾಟಿಕಲ್ ಸೊಸೈಟಿ ಅಧ್ಯಕ್ಷರೂ ನೆಲ್ಲೂರು ಜಿಲ್ಲೆಯ ಕಲೆಕ್ಟರ್ ಆಗಿಯೂ ಇದ್ದಂಥ ಆರ್. ರಾಮಚಂದ್ರರಾವ್ ಎಂಬವರನ್ನು ರಾಮಾನುಜನ್ ಭೇಟಿಯಾದರು. ರಾಮಾನುಜನ್ ಅವರ ಪ್ರತಿಭೆಯನ್ನೂ ಬಡತನವನ್ನೂ ಗುರುತಿಸಿದ ರಾಮಚಂದ್ರರಾಯರು ತಾವು ಪ್ರತಿಯೊಂದು ತಿಂಗಳೂ ಒಂದಷ್ಟು ಭತ್ಯೆ ಕೊಡುವುದಾಗಿ ಹೇಳಿ ಅದರಿಂದ ಸಂಶೋಧನೆಯನ್ನು ಮದ್ರಾಸಿನಲ್ಲೇ ಮುಂದುವರಿಸಬೇಕೆಂದು ತಿಳಿಸಿದರು. ಹೀಗಾಗಿ ರಾಮಾನುಜನ್ ಕೆಲವು ಕಾಲ (1911-12) ಮದರಾಸಿನಲ್ಲೇ ಉಳಿದುಕೊಂಡು ಸಂಶೋಧನೆ ಮುಂದುವರಿಸಿದರಾದರೂ ಬಹಳಷ್ಟು ಕಾಲದ ತನಕ ಪರಾವಲಂಬಿಗಳಾಗಿರಲು ಇಷ್ಟಪಡಲಿಲ್ಲ. ಬಳಿಕ ರಾಮಾನುಜನ್ ತಿರುಕೋಟ್ಟಿಯೂರಿನ ಡೆಪ್ಯುಟಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ್ದ ವಿ. ರಾಮಸ್ವಾಮಿ ಅಯ್ಯರ್ ಎಂಬವರನ್ನು ಭೇಟಿಯಾಗಿ ತಮಗೆ ಯಾವುದಾದರೂ ಕಿರಿಯ ಗುಮಾಸ್ತ ಕೆಲಸ ಕೊಡಿಸಬೇಕೆಂದು ಪ್ರಾರ್ಥಿಸಿದರು. ರಾಮಸ್ವಾಮಿ ಅಯ್ಯರ್ ಅವರ ಶಿಫಾರಸ್ಸಿನ ಮೇಲೆ, ಕುಂಭಕೋಣಮ್ಮಿನಲ್ಲಿ ರಾಮಾನುಜನ್ನರ ಗುರುವೂ ಗಣಿತಪ್ರಾಧ್ಯಾಪಕರೂ ಆಗಿದ್ದ ವಿ. ವಿ. ಶೇಷು ಅಯ್ಯರ್ ಎಂಬವರನ್ನು ಭೇಟಿಯಾಗಿ ಅವರಲ್ಲಿ ತಮ್ಮ ಅಳಲನ್ನು ತೋಡಿಕೊಂಡರು. ರಾಮಾನುಜನ್ನರ ಗಣಿತಾಸಕ್ತಿಯನ್ನೂ ಪ್ರತಿಭೆಯನ್ನೂ ಗುರುತಿಸಿದ ಅಯ್ಯರ್ ಇವರಿಗೆ ಮದರಾಸು ವಿಶ್ವವಿದ್ಯಾಲಯದ ಸಂಶೋಧನ ವಿದ್ಯಾರ್ಥಿವೇತನ ದೊರಕಿಸಿಕೊಡಲು ಪ್ರಯತ್ನಿಸಿದರು. ಆದರೆ ಅವರು ಸಫಲರಾಗಲಿಲ್ಲ. ಮುಂದೆ ಅಯ್ಯರ್ ಅವರ ಮುಂದುವರಿದ ಪ್ರಯತ್ನದಿಂದಾಗಿ ರಾಮಾನುಜನ್ನರಿಗೆ ಮದರಾಸ್ ಪೋರ್ಟ್ ಟ್ರಸ್ಟ್ ಕಛೇರಿಯಲ್ಲಿ ಗುಮಾಸ್ತನ ಕೆಲಸ ದೊರೆಯಿತು. ರಾಮಾನುಜನ್ನರ ಹಿರಿಮೆಯನ್ನು ಮನಗಂಡ ಟ್ರಸ್ಟಿನ ಅಧ್ಯಕ್ಷ ಸರ್ ಫ್ರಾನ್ಸಿಸ್ ಸ್ಟ್ರಿಂಗ್ ಎಂಬವರು ಗಣಿತಾಧ್ಯಯನವನ್ನು ಮುಂದುವರಿಸಲು ಎಲ್ಲ ಬಗೆಯ ಪ್ರೋತ್ಸಾಹ ನೀಡಿದರು. 
ತಮ್ಮ ಕಛೇರಿ ಕೆಲಸದ ಮಧ್ಯೆಯೂ ಗಣಿತಾಧ್ಯಯನವನ್ನು ಮುಂದುವರಿಸಿಕೊಂಡು ಬಂದ ರಾಮಾನುಜನ್ ಬರ್ನೂಲೀ ಸಂಖ್ಯೆಗಳ ವಿಚಾರವಾಗಿ ಒಂದು ಲೇಖನವನ್ನು ಜರ್ನಲ್ ಆಫ್ ದಿ ಇಂಡಿಯನ್ ಮ್ಯಾಥಮಾಟಿಕಲ್ ಸೊಸೈಟಿ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಇದರಿಂದಾಗಿ ರಾಮಾನುಜನ್ನರ ಖ್ಯಾತಿ ಹೆಚ್ಚಿತು. ಟ್ರಸ್ಟಿನ ಅಧ್ಯಕ್ಷರು ರಾಮಾನುಜನ್ನರಿಗೆ ಮದರಾಸ್ ವಿಶ್ವವಿದ್ಯಾಲಯದ ಸಂಶೋಧನ ವಿದ್ಯಾರ್ಥಿವೇತನ ದೊರಕಿಸಿಕೊಡಲು ಪ್ರಯತ್ನಿಸಿದರು. ಇದರ ಜೊತೆಗೆ ಸ್ಟ್ರಿಂಗರ ಸ್ನೇಹಿತರಾದ ಜಿ. ಟಿ. ವಾಕರ್ ಎಂಬವರೂ ರಾಮಾನುಜನ್ನರ ಪ್ರತಿಭೆ ಮತ್ತು ಸಿದ್ಧಿಗಳನ್ನು ಗುರುತಿಸಿ ವಿದ್ಯಾರ್ಥಿವೇತನದ ವಿಚಾರದಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಕುಲಸಚಿವರಿಗೆ ಶಿಫಾರಸ್ಸು ಪತ್ರ ಬರೆದರು. ಇದಕ್ಕೆ ಮೊದಲು ತೀರಾ ಅಲ್ಪವರಮಾನದಿಂದ ಸಂಶೋಧನೆಯನ್ನೂ ಜೀವನವನ್ನೂ ಸಾಗಿಸುತ್ತಿದ್ದ ರಾಮಾನುಜನ್ನರು ತಮ್ಮ ಗಣಿತ ಸಂಶೋಧನೆಗಳನ್ನು ಕುರಿತು ಕೇಂಬ್ರಿಜ್ ವಿಶ್ವವಿದ್ಯಾಲಯದ ಗಣಿತ ಪ್ರಾಧ್ಯಾಪಕರಾದ ಜಿ. ಎಚ್. ಹಾರ್ಡಿ (1877-1947) ಎಂಬವರೊಂದಿಗೆ ಪತ್ರವ್ಯವಹಾರ ನಡೆಸಿ, ಮದ್ರಾಸ್ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿವೇತನ ದೊರಕಿಸಿಕೊಡುವಂತೆ ಶಿಫಾರಸ್ಸು ಪತ್ರ ಬರೆಯಬೇಕೆಂದೂ ಕೇಳಿಕೊಂಡಿದ್ದರು. ಹಾರ್ಡಿಯವರ ಸಹೋದ್ಯೋಗಿ ಇ. ಎಚ್. ನೆವಿಲ್ ಎಂಬವರು ಸಂದರ್ಶನ ಪ್ರಾಧ್ಯಾಪಕರಾಗಿ ಮದರಾಸಿಗೆ ಹೋಗುವವರಿದ್ದು ರಾಮಾನುಜರನ್ನು ಕೇಂಬ್ರಿಜ್‍ಗೆ ಬರುವಂತೆ ಮಾಡಲು ನೆವಿಲ್ ಅವರಿಗೆ ಹಾರ್ಡಿ ಸೂಚಿಸಿದ್ದರು. ನೆವಿಲ್ ಮದರಾಸಿಗೆ ಬಂದು ರಾಮಾನುಜರನ್ನು ಭೇಟಿ ಮಾಡಿ ಕೇಂಬ್ರಿಜ್ಜಿಗೆ ಹೋಗಲು ಒಪ್ಪಿಸಿದ್ದರು. ರಾಮಾನುಜನ್ನರ ತಾಯಿಯ ಕನಸಿನಲ್ಲಿ ಅವರ ಆರಾಧ್ಯದೈವ ನಾಮಗಿರಿದೇವಿ ಕಾಣಿಸಿಕೊಂಡು ಮಗನನ್ನು ವಿದೇಶಕ್ಕೆ ಕಳುಹಿಸಿಕೊಡಲು ಆದೇಶ ನೀಡಿದ್ದಳಂತೆ. ಇದರಿಂದಾಗಿ ರಾಮಾನುಜನ್ನರಿಗೆ ತಾಯಿಯಿಂದ ಅನುಮತಿಯೂ ದೊರೆಯಿತು.
ಆದರೆ ವಿದೇಶಯಾತ್ರೆಯ ಸಲುವಾಗಿ ರಾಮಾನುಜರಿಗಿದ್ದ ಆರ್ಥಿಕ ತೊಂದರೆಯ ಬಗ್ಗೆ ನೆವಿಲ್ ಮದರಾಸ್ ವಿಶ್ವವಿದ್ಯಾಲಯ ಕುಲಸಚಿವರಿಗೆ ಪತ್ರ ಬರೆದು ರಾಮಾನುಜನ್ನರ ಅಸಾಧಾರಣ ಸಾಮಥ್ರ್ಯ, ಪ್ರತಿಭೆಗಳ ಬಗ್ಗೆ ಪ್ರಶಂಸಿಸಿ ಪ್ರಪಂಚವಿಖ್ಯಾತ ಗಣಿತವಿದರೊಡನೆ ರಾಮಾನುಜನ್ ಸಂಪರ್ಕ ಹೊಂದುವುದರ ಅಗತ್ಯವನ್ನು ಒತ್ತಿ ಹೇಳಿದ್ದರು. ಮದರಾಸು ವಿಶ್ವವಿದ್ಯಾನಿಲಯ ಈ ಎಲ್ಲ ಅಂಶಗಳನ್ನೂ ಮನಗಂಡು ತನ್ನ ಸಂಶೋಧನಾ ವಿದ್ಯಾರ್ಥಿವೇತನವನ್ನು ರಾಮಾನುಜನ್ನರಿಗೆ ಒದಗಿಸಿಕೊಟ್ಟಿತು (1913). ರಾಮಾನುಜನ್ ಅವರಿಗೆ ವರ್ಷಕ್ಕೆ 250 ಪೌಂಡುಗಳಂತೆ ಎರಡು ವರ್ಷಗಳ ತನಕ ವೇತನವೂ ಪ್ರಯಾಣಕ್ಕೆ ತಗಲುವ ವೆಚ್ಚವೂ ಲಭಿಸಿದುವು. ತನಗೆ ಒದಗುವ ವೇತನದಿಂದ ರೂ. 60ನ್ನು ತನ್ನ ತಾಯಿಗೆ ನೀಡುವಂತೆ ರಾಮಾನುಜನ್ ವ್ಯವಸ್ಥೆ ಮಾಡಿದ್ದರು. ರಾಮಾನುಜನ್ 1914 ಮಾರ್ಚ್ 17ರಂದು ಕೇಂಬ್ರಿಜ್‍ಗೆ ಪ್ರಯಾಣ ಬೆಳೆಸಿದರು. ಅದೇ ವರ್ಷದ ಏಪ್ರಿಲ್ 14 ರಂದು ಇಂಗ್ಲೆಂಡ್ ತಲುಪಿದರು. ಆಗ ಅವರ ಪ್ರಾಯ ಕೇವಲ 26 ವರ್ಷಗಳಾಗಿತ್ತು. ಹಾರ್ಡಿಯವರ ಶಿಫಾರಸ್ಸು ಪತ್ರ, ನೆವಿಲ್ ಅವರ ರಾಯಭಾರಿತ್ವ, ವಿಶ್ವವಿದ್ಯಾಲಯಕ್ಕೆ ಉಂಟಾದ ಅರಿವು, ದೈವಾದೇಶ ಹಾಗೂ ತಾಯಿಯ ಅನುಮತಿಗಳೆಲ್ಲ ರಾಮಾನುಜ ಎಂಬ ಗಣಿತಪ್ರತಿಭೆ ಸ್ವದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಬೆಳಗುವುದಕ್ಕೆ ಅವಕಾಶಮಾಡಿಕೊಟ್ಟವು. ರಾಮಾನುಜನ್ ಅವರು ಕೇಂಬ್ರಿಜ್‍ಗೆ ಬಂದು ಟ್ರಿನಿಟಿ ಕಾಲೇಜನ್ನು ಸೇರಿದ್ದು ಒಂದು ವಿಧದಲ್ಲಿ ಹಾರ್ಡಿಯವರಿಗೆ ಬಲು ಸಂತಸವನ್ನೇ ಉಂಟುಮಾಡಿತ್ತು. ಏಕೆಂದರೆ ತಮಗೆ ರಾಮಾನುಜನ್ ಬರೆದಿದ್ದ ಕಾಗದದೊಂದಿಗೆ ಲಗತ್ತಿಸಿದ್ದ ಗಣಿತ ಫಲಿತಾಂಶಗಳಲ್ಲಿ ಅಡಗಿದ್ದ ಸ್ವಂತಿಕೆ, ಸೃಜನಾತ್ಮಕತೆ, ಗಣಿತೀಯ ಸೌಂದರ್ಯ ಹಾಗೂ ಪ್ರತಿಪಾದನೆಗಳನ್ನು ಹಾರ್ಡಿ ಮನಸಾರ ಮೆಚ್ಚಿಕೊಂಡಿದ್ದರು. ಗಣಿತ ಕ್ಷೇತ್ರದಲ್ಲಿ ಕಾಣಬರುವ ಅವಿಭಾಜ್ಯ ಸಂಖ್ಯೆಗಳು, ಅಪಸರಣ ಶ್ರೇಣಿಗಳು, ವಿಭಾಗೀಕರಣ ವಿಚಾರಗಳು ಮುಂತಾದ ವಿಚಾರಗಳಲ್ಲಿ ರಾಮಾನುಜನ್ನರ ತಾರ್ಕಿಕಸಾಮಥ್ರ್ಯ, ಗಣಿತೀಯ ವಿಶ್ಲೇಷಣೆಗಳನ್ನು ಹಾರ್ಡಿ ಸ್ವತಃ ಅನುಭವಿಸಿ ಆನಂದಿಸಿದ್ದರು. 1914-16ರ ಅವಧಿಯಲ್ಲಿ ರಾಮಾನುಜನ್ ಇಂಗ್ಲೆಂಡಿನ ವಿವಿಧ ಸಂಶೋಧನ ನಿಯತಕಾಲಿಕೆಗಳಲ್ಲಿ 12 ಫಲಿತಾಂಶಗಳನ್ನು ಪ್ರಕಟಿಸಿದ್ದರು. ಕೇಂಬ್ರಿಜ್‍ನ ಗಣಿತ ವಿಭಾಗದಲ್ಲಿನ ವಿದ್ವಜ್ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದೇ ಕೇಂಬ್ರಿಜ್ ವಿಶ್ವವಿದ್ಯಾಲಯ ರಾಮಾನುಜನ್ನರಿಗೆ 1916ರಲ್ಲಿ ತನ್ನ ಗೌರವ ಬಿ. ಎ. ಪದವಿಯನ್ನು ನೀಡಿ ಗೌರವಿಸಿತು. ಲಂಡನ್ನಿನ ಪ್ರತಿಷ್ಠಿತ ವಿಜ್ಞಾನಸಂಘವೆನಿಸಿದ್ದ ರಾಯಲ್ ಸೊಸೈಟಿ ರಾಮಾನುಜನ್ನರ ಪ್ರತಿಭಾ ಪಾಂಡಿತ್ಯವನ್ನು ಗುರುತಿಸಿ ಎಫ್. ಆರ್. ಎಸ್. ಪ್ರಶಸ್ತಿ ನೀಡಿತು (1918). ರಾಮಾನುಜನ್ ಈ ಪ್ರಶಸ್ತಿ ಪಡೆದ ಎರಡನೆಯ ಭಾರತೀಯರಾದರು. ಸಂದ ಈ ಗೌರವಗಳ ಸಲುವಾಗಿ ಇವರಿಗೆ ಟ್ರಿನಿಟಿ ಕಾಲೇಜಿನಿಂದ ವರ್ಷಕ್ಕೆ 250 ಪೌಂಡುಗಳ, ಆರು ವರ್ಷಗಳ ಪರ್ಯಂತ ಬಹುಮಾನಧನವೂ ಒದಗಿತು. ಇದನ್ನು ಮನಗಂಡ ಮದರಾಸ್ ವಿಶ್ವವಿದ್ಯಾಲಯ ತಾನೂ ಅದೇ ಮೊತ್ತದ ಬಹುಮಾನ ಮೊಬಲಗನ್ನು ಐದು ವರ್ಷ ಪರ್ಯಂತ ನೀಡುವುದಾಗಿ ಹೇಳಿ ತನ್ನ ಔದಾರ್ಯ ಪ್ರದರ್ಶಿಸಿತು. ಇದರ ಜೊತೆಗೆ ವಿಶ್ವವಿದ್ಯಾಲಯದ ಗಣಿತ ಪ್ರಾಧ್ಯಾಪಕಪೀಠಕ್ಕೆ ಆಹ್ವಾನಿಸುವುದಾಗಿಯೂ ತಿಳಿಸಿತು. ಇದನ್ನು ಅರಿತ ರಾಮಾನುಜನ್ ಮದರಾಸ್ ವಿಶ್ವವಿದ್ಯಾಲಯಕ್ಕೆ ತನ್ನ ಹೃತ್ಪೂರ್ವಕ ಕೃತಜ್ಞತೆ ಅರ್ಪಿಸಿದರು (1919).
ರಾಮಾನುಜನ್ ತಮ್ಮ ತನುಮನಗಳನ್ನು ಗಣಿತಾಧ್ಯಯನಕ್ಕೆ ಅರ್ಪಿಸಿಕೊಂಡು ಅದರ ಆನಂದಾನುಭವವನ್ನು ಪಡದ ಪ್ರತಿಭಾವಂತ. ಇದರ ಬಗ್ಗೆ ಹಾರ್ಡಿ ಅವರೇ ಪ್ರತಿಕ್ರಿಯಿಸಿದ್ದರು. ರಾಮಾನುಜನ್ ಅವರ ಜ್ಞಾನದ ಸೀಮಿತಗಳು ಅದರ ಗಂಭೀರತೆಯಷ್ಟೇ ಚಕಿತಗೊಳಿಸುವಂತಿವೆ. ಮಾಡ್ಯುಲರ್ ಸಮೀಕರಣಗಳನ್ನೂ ಮಿಶ್ರಗುಣಾಕಾರದ ಪ್ರಮೇಯಗಳನ್ನೂ ವರ್ಗಗಳನ್ನೂ ನಿಭಾಯಿಸುತ್ತಿದ್ದ ಅವರ ಪರಿಯನ್ನೂ ಹಾರ್ಡಿಯವರು ಮೆಚ್ಚಿಕೊಂಡಿದ್ದರು. ಸಂತತ ಭಿನ್ನರಾಶಿಗಳ ಬಗ್ಗೆ ರಾಮಾನುಜನ್ನರ ಅಪ್ರತಿಮ ಪ್ರಭುತ್ವವನ್ನು ಮನಸಾರ ಶ್ಲಾಘಿಸಿದ್ದರು. ಜೀಟಾ ಉತ್ಪನ್ನದ ಉತ್ಪನ್ನಾತ್ಮಕ ಸಮೀಕರಣವನ್ನೂ ಸಂಖ್ಯೆಗಳ ವಿಶ್ಲೇಷಣಾ ಸಿದ್ಧಾಂತದ ಅತ್ಯಂತ ಪ್ರಸಿದ್ಧ ಸಮಸ್ಯೆಗಳಲ್ಲಿಯ ಪ್ರಧಾನಪದಗಳನ್ನೂ ರಾಮಾನುಜನ್ ಸ್ವತಃ ಸಂಶೋಧಿಸಿದ್ದರು. ಆದರೆ ದ್ವಿನಿಯತಕಾಲಿಕವನ್ನಾಗಲಿ ಕೌಶಿ ಎಂಬವನ ಪ್ರಮೇಯವನ್ನಾಗಲಿ ರಾಮಾನುಜನ್ ಕೇಳಿಯೇ ಇರಲಿಲ್ಲ. ಮಿಶ್ರಚರ ಉತ್ಪನ್ನಗಳ ಬಗ್ಗೆ ಅವರ ಕಲ್ಪನೆ ತೀರಾ ಅಸ್ಪಷ್ಟ. ಅವರು ಎಲ್ಲ ಫಲಿತಾಂಶಗಳನ್ನೂ ಅಂತರ್ಬೋಧೆ ಮತ್ತು ಅನುಗಮನ ಬೆರೆತ ಸಮ್ಮಿಶ್ರ ಪ್ರಕ್ರಿಯೆಯೊಂದರ ಮೂಲಕ ಪಡೆದಿದ್ದರು ಎಂದು ಮುಂತಾದ ಅಭಿಪ್ರಾಯಗಳನ್ನು ಹಾರ್ಡಿ ತಳೆದಿದ್ದರು. ಹಾರ್ಡಿ ಮತ್ತು ಅವರ ಸಹೋದ್ಯೋಗಿ ಲಿಟಲ್‍ವುಡ್ ಎಂಬವರು ರಾಮಾನುಜನ್ನರ ಶಿಕ್ಷಣದ ಹೊಣೆ ಹೊತ್ತುಕೊಂಡಿದ್ದರು. 1914-18ರ ಅವಧಿಯಲ್ಲಿ ರಾಮಾನುಜನ್ ಸುಮಾರು 24 ಸಂಶೋಧನ ಪ್ರಬಂಧಗಳನ್ನು ಪ್ರಕಟಿಸಿದ್ದರು. ಟ್ರಿನಿಟಿ ಕಾಲೇಜಿನ ಮತ್ತೊಬ್ಬ ಫೆಲೋ ಆಗಿದ್ದ ಇ. ಡಬ್ಲ್ಯು. ಬಾರ್ನೆಸ್ ಎಂಬವರೂ ರಾಮಾನುಜನ್ನರ ಪ್ರಗತಿ, ಪ್ರತಿಭೆಗಳನ್ನು ಕುರಿತು ಮದರಾಸ್ ವಿಶ್ವವಿದ್ಯಾಲಯಕ್ಕೆ ವರದಿ ಕಳುಹಿಸಿದ್ದರು.

ಇಂಗ್ಲೆಂಡಿನ ಕೇಂಬ್ರಿಜ್ ಕಾಲೇಜಿನಲ್ಲಿ ತಮ್ಮ ಅಧ್ಯಯನ ಸಂಶೋಧನೆಗಳನ್ನು ನಡೆಸುತ್ತಿದ್ದ ರಾಮಾನುಜನ್ ಅವರಿಗೆ ತಲೆದೋರಿದ ಸಮಸ್ಯೆ ಎಂದರೆ ಆಹಾರ ಸಮಸ್ಯೆಯೇ. ಅಲ್ಲಿ ಇದ್ದ ಪರ್ಯಂತವೂ ತಾವೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದರು. ಕಾಲೇಜಿನಲ್ಲಿ ಒಳ್ಳೆಯ ಶಾಕಾಹಾರ ದೊರೆಯುತ್ತಿಲ್ಲ. ಹೊರಗೆ ಹೋಗಿ ತರುವುದು ನನಗೆ ಅಸಾಧ್ಯ ಎಂಬೆಲ್ಲ ಮಾತುಗಳನ್ನು ರಾಮಾನುಜನ್ ಭಾರತದಲ್ಲಿದ್ದ ತಮ್ಮ ಮಿತ್ರರೊಬ್ಬರಿಗೆ ಬರೆದುಕೊಂಡಿದ್ದರಂತೆ. ತಮ್ಮ ಆಹಾರದ ಅಗತ್ಯ ವಸ್ತುಗಳನ್ನು ಭಾಂಗಿ ಮೂಲಕ ಕಳುಹಿಸಿಕೊಡುವಂತೆಯೂ ಕೇಳಿಕೊಂಡಿದ್ದರಂತೆ. ಒಂದೆಡೆ ಗಣಿತಪ್ರಪಂಚದ ಸಮಸ್ಯಾವ್ಯೂಹವನ್ನು ಭೇದಿಸುವ ಮಾನಸಿಕ ಆಲೋಚನೆ, ಮತ್ತೊಂದೆಡೆ ಆಹಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಚಿಂತನೆ. ಇವೆರಡೂ ವಿಷಯಗಳ ಬಗ್ಗೆ ಚಿಂತಿಸುತ್ತಿದ್ದ ರಾಮಾನುಜನ್ನರ ಆರೋಗ್ಯ ದಿನೇ ದಿನೇ ಕ್ಷೀಣಿಸತೊಡಗಿತು. ಇಂಗ್ಲೆಂಡಿನ ಹವೆ ಕೂಡ ಇವರ ಆರೋಗ್ಯಕ್ಕೆ ಪ್ರತಿಕೂಲವೆನಿಸಿತ್ತು. ಇವರ ಆರೋಗ್ಯ ಹದಗೆಡುತ್ತಿರುವ ಬಗ್ಗೆ ಹಾರ್ಡಿ ಮದರಾಸ್ ವಿಶ್ವವಿದ್ಯಾಲಯಕ್ಕೆ ತಿಳಿಸಿದ್ದರು. ಅಂದಿನ ದಿವಸಗಳಲ್ಲಿ ಪ್ರಪಂಚದ ಯುದ್ಧಗಳು ತಾಂಡವವಾಡುತ್ತಿದ್ದು ಭಾರತದಲ್ಲಿ ಕೂಡ ಅದರ ಪರಿಣಾಮ ಗೋಚರವಾಗುತ್ತಿತ್ತು. ಅಲ್ಲದೆ ಅಂದಿನ ದಿವಸಗಳಲ್ಲಿ ಭಾರತದಲ್ಲಿ ಸಮರ್ಥ ವೈದ್ಯಕೀಯ ಸೇವೆ ಲಭಿಸುವುದು ಕೂಡ ಕಷ್ಟವೆನಿಸುತ್ತಿತ್ತು. ಇಂಥ ಪರಿಸ್ಥಿತಿಯಲ್ಲಿ ರಾಮಾನುಜನ್ನರನ್ನು ಭಾರತಕ್ಕೆ ಮರಳಿ ಕಳುಹಿಸುವ ಯೋಜನೆಯನ್ನು ಮಾಡಿದ್ದರಾದರೂ ಅದನ್ನು ಕೈಬಿಟ್ಟು ಅವರನ್ನು ಲಂಡನ್ನಿನ ವಿಶ್ರಾಂತಿಧಾಮವೊಂದಕ್ಕೆ ಸೇರಿಸಿದರು. ಮೇಲಿಂದ ಮೇಲೆ ಆರೋಗ್ಯ ತಪಾಸಣೆಗಳು ನಡೆದು ರಾಮಾನುಜನ್ನರು ಕ್ಷಯರೋಗಕ್ಕೆ ಈಡಾಗಿದ್ದಾರೆಂಬುದು ಖಚಿತಪಟ್ಟಿತು. ಯಾವುದೇ ಬಗೆಯ ಔಷಧಗಳಾದರೂ ಆಹಾರವಾದರೂ ರಾಮಾನುಜನ್ನರ ದೇಹಪ್ರಕೃತಿಗೆ ಒಗ್ಗುವಂತಿರಲಿಲ್ಲ. ಹೀಗಾಗಿ 1917-18ರ ಅವಧಿಯಲ್ಲಿ ಇವರನ್ನು ಒಂದು ವಿಶ್ರಾಂತಿಧಾಮದಿಂದ ಇನ್ನೊಂದು ವಿಶ್ರಾಂತಿಧಾಮಕ್ಕೆ ಅಲ್ಲಿಂದ ಮಗದೊಂದು ವಿಶ್ರಾಂತಿಧಾಮಕ್ಕೆ ವರ್ಗಾವಣೆ ಮಾಡುವುದೇ ಆಯಿತು.
ರಾಮಾನುಜನ್ನರ ಆರೋಗ್ಯ ತಕ್ಕಮಟ್ಟಿಗೆ ಸುಧಾರಿಸಿದೆ ಎಂದು ಕಂಡುಬಂದಾಗ ಹಾರ್ಡಿಯವರು ಮದರಾಸ್ ವಿಶ್ವವಿದ್ಯಾಲಯಕ್ಕೆ ಕಾಗದ ಬರೆದು ರಾಮಾನುಜನ್ನರ ಸುದೀರ್ಘ ವ್ಯಾಧಿ ಹಾಗೂ ಅವರ ಏಕಾಂತಜೀವನ ಅವರ ಮೇಲೆ ದುಷ್ಪರಿಣಾಮ ಉಂಟುಮಾಡಿವೆ ಎಂಬುದನ್ನು ತಿಳಿಸಿದ್ದರು. ರಾಮಾನುಜನ್ನರನ್ನು ವಾಪಸ್ಸು ಕರೆಸಿಕೊಂಡು ಅವರ ಆರೋಗ್ಯ ಸುಧಾರಿಸಲು ತಾವೂ ಸಹಕಾರ ನೀಡಬೇಕೆಂಬುದಾಗಿ ಕೇಳಿರುವ ಒಕ್ಕಣೆಯೂ ಆ ಪತ್ರದಲ್ಲಿತ್ತು. ಇದನ್ನು ಮದರಾಸ್ ವಿಶ್ವವಿದ್ಯಾಲಯ ಅಂಗೀಕರಿಸಿದ್ದರ ಸಲುವಾಗಿ ರಾಮಾನುಜನ್ 1919 ಫೆಬ್ರವರಿ 27ರಂದು ಲಂಡನ್ನನ್ನು ಬಿಟ್ಟು ಅದೇ ಮಾರ್ಚ್ 27ರಂದು ಮುಂಬೈ ತಲಪಿ ಬಳಿಕ ಏಪ್ರಿಲ್ 2 ರಂದು ಮದರಾಸಿಗೆ ಬಂದರು. ಭಾರತಕ್ಕೆ ಮರಳಿಬಂದ ರಾಮಾನುಜನ್ನರನ್ನು ಹಾರ್ಡಿ ಅವರು `ಭಾರತದ ಭಾಗ್ಯ ಎಂದು ಶ್ಲಾಘಿಸಿದ್ದರು. ತೀವ್ರಸ್ವರೂಪದ ದೈಹಿಕಯಾತನೆಯಿಂದ ನರಳುತ್ತಿದ್ದಾಗ ರಾಮಾನುಜನ್ನರು ಅದನ್ನು ಮರೆಯಲು ಗಣಿತಚಿಂತನೆಯನ್ನೇ ತಮ್ಮ ರಾಮಮಂತ್ರವನ್ನಾಗಿ ಮಾಡಿಕೊಂಡಿದ್ದರು. ಪತಿಯ ಎಲ್ಲ ಶುಶ್ರೂಷೆಯನ್ನೂ ನೋಡಿಕೊಳ್ಳುತ್ತಿದ್ದ ಪತ್ನಿ ಜಾನಕಿ ಬಳಿಯೇ ಇದ್ದು ರಾಮಾನುಜನ್ನರಿಗೆ ಅಗತ್ಯವಿದ್ದ ಎಲ್ಲ ಲೇಖನಸಾಮಗ್ರಿಗಳನ್ನೂ ಒದಗಿಸುತ್ತಿದ್ದರು. ಅವರು ಟಿಪ್ಪಣಿ ಮಾಡಿಕೊಳ್ಳುತ್ತಿದ್ದ ಕಾಗದದ ಹಾಳೆಗಳನ್ನೆಲ್ಲ ಜೋಪಾನವಾಗಿರಿಸುತ್ತಿದ್ದರು. ಆ ಟಿಪ್ಪಣಿ ಕಾಗದಗಳೇ ಇಂದು ಗಣಿತಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಗಳೆನಿಸಿವೆ.

ಮದರಾಸ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ ಗಣಿತ ಪ್ರೊಫೆಸರ್ ಸ್ಥಾನಕ್ಕೆ ಇವರನ್ನು ನೇಮಕ ಮಾಡುವ ಯೋಚನೆ ಒಂದೆಡೆಯಾದರೆ ಇವರ ಆರೋಗ್ಯ ಸುಧಾರಿಸುವಂತೆ ಮಾಡುವ ಪ್ರಯತ್ನ ಇನ್ನೊಂದೆಡೆ ನಡೆದಿತ್ತು. ಇವರನ್ನು ಉಳಿಸಲು ಮಾಡಿದ ಎಲ್ಲ ಪ್ರಯತ್ನಗಳೂ ವಿಫಲಗೊಂಡು, ರಾಮಾನುಜನ್ 1920 ಏಪ್ರಿಲ್ 26ನೆಯ ಸೋಮವಾರ ಕೊನೆಯುಸಿರೆಳೆದರು. ಆಗ ಅವರಿಗೆ ಕೇವಲ 33 ವರ್ಷ ವಯಸ್ಸಾಗಿತ್ತು.

ರಾಮಾನುಜನ್ನರ ಸಾವಿನ ಬಗ್ಗೆ ಶೋಕ ವ್ಯಕ್ತಪಡಿಸುತ್ತ ಹಾರ್ಡಿಯವರು ಬರೆದು ಇವರ ಪಾಂಡಿತ್ಯವನ್ನು ಪ್ರತಿಭೆಯನ್ನೂ ಮನಃಪೂರ್ತಿಯಾಗಿ ಶ್ಲಾಘಿಸಿದ್ದರು. ಇವರ ಮರಣ ಗಣಿತಪ್ರಪಂಚಕ್ಕೆ ತುಂಬಲಾರದ ನಷ್ಟವೆನ್ನುವ ಮಾತನ್ನು ಹಲವು ಪರಿಗಳಲ್ಲಿ ವ್ಯಕ್ತಪಡಿಸಿದ್ದರು.

	
ರಾಮಾನುಜನ್ನರಿಗೆ ಗಣಿತದಲ್ಲಿ ಇದ್ದ ಆಸಕ್ತಿ ಅಪಾರ. ಸಂಖ್ಯೆಗಳೊಂದಿಗೆ ಸೆಣಸಾಟವಾಡುವುದೆಂದರೆ ಅವರಿಗೆ ಬಲು ಪ್ರಿಯ, ಸ್ವಿಸ್ ಗಣಿತದಿಂದ ಲಯೋನಾರ್ಡ್ ಅಯ್ಲರ್ (1707-83) ಎಂಬವನಿಗೆ ಮಾಯಾಚೌಕಗಳ ಬಗ್ಗೆ ಇದ್ದ ಆಸಕ್ತಿಯಂತೆಯೇ ರಾಮಾನುಜನ್ ಕೂಡ ಮಾಯಾಚೌಕಗಳ ವಿಚಾರವಾಗಿ ಮನಸೋತಿದ್ದರು. ಇಂಚುಪಟ್ಟಿ ಮತ್ತು ಕೈವಾರಗಳನ್ನು ಮಾತ್ರ ಉಪಯೋಗಿಸಿ ಯಾವುದೇ ವೃತ್ತದ ಸಲೆಗೆ ಸಮನಿರುವ ಚೌಕವನ್ನು ರಚಿಸುವುದರ ಬಗ್ಗೆ ವಿಶೇಷ ಆಸಕ್ತಿ ತಳೆದಿದ್ದರು. ಸಂಖ್ಯೆಗಳನ್ನು ಬೇರೆ ಬೇರೆ ರೀತಿಗಳಲ್ಲಿ ಅನಂತವರ್ಗ. ಮೂಲಾಂತರ್ಗತ ವರ್ಗಮೂಲಗಳಾಗಿ ನಿರೂಪಿಸಿವುದು, ಸೊನ್ನೆಯನ್ನು ಸೊನ್ನೆಯಿಂದಲೇ ಭಾಗಸಿದಾಗ ಏನಾಗುತ್ತದೆ ಎಂಬುದು, ಅವಿಭಾಜ್ಯ ಸಂಖ್ಯೆಗಳು, ಘನಮೂಲಗಳು, ಅಪಸರಣಶ್ರೇಣಿಗಳು, ಗಣಿತದಲ್ಲಿನ ಅಸಾಂಗತ್ಯಗಳು, ಅಯ್ಲೇರಿನ್ ಅನುಕಲನಗಳು, ಅನಂತಶ್ರೇಣಿಗಳು, ಸಂಖ್ಯೆಗಳ ವಿಭಾಗೀಕರಣ ಹಾಗೂ ಗುಣಗಳು-ಹೀಗೆ ಹಲವು ಗಣಿತವಿಭಾಗಗಳಲ್ಲಿ ರಾಮಾನುಜನ್ ಶ್ರದ್ಧೆಯಿಂದಲೂ ನಿಜಾಸಕ್ತಿಯಿಂದಲೂ ಶ್ರಮಿಸಿ ಮಹೋನ್ನತ ಸಾಧನೆ ಮಾಡಿದ್ದರು. ಪ್ರೊ. ಹಾರ್ಡಿಯವರ ನೇತೃತ್ವದಲ್ಲಿ ರಾಮಾನುಜನ್ ಐದು ವರ್ಷಗಳ ಕಾಲ ಕೆಲಸಮಾಡಿ ಅನೇಕ ಲೇಖನಗಳನ್ನು ಪ್ರಕಟಿಸಿದರು. ಅವುಗಳ ಪೈಕಿ ಏಳು ಲೇಖನಗಳಿಗೆ ಹಾರ್ಡಿ ಬಲು ಪ್ರಾಶಸ್ತ್ಯ ಕೊಟ್ಟಿದ್ದರು. ಮಾಡ್ಯುಲರ್ ಸಮೀಕರಣಗಳು ಮತ್ತು ಪೈ (() ಸನ್ನಿಹಿತ ಬೆಲೆಗಳು, ಅತಿಮಿಶ್ರ ಸಂಖ್ಯೆಗಳು. ಕೆಲವು ಪಾಟೀ ಅನುಸ್ಥಾಪನಗಳು, ತ್ರಿಕೋನಮಿತಿಯ ಮೊತ್ತಗಳು ಮತ್ತು ಸಂಖ್ಯಾವಿಚಾರಕ್ಕೆ ಅವುಗಳ ಪ್ರಯೋಗಗಳು. ಟಿ ನ ವಿಭಾಗ ಸಂಖ್ಯೆಯಾದ P(ಟಿ)ನ ಕೆಲವು ಗುಣಗಳು. ಯೋಗವಿಶ್ಲೇಷಣೆಯಲ್ಲಿ ಕೆಲವು ಸರ್ವಸಮತ್ವಗಳ ಸಾಧನೆ, ವಿಭಾಗಗಳ ಏಕತಾ ಗುಣಗಳು. ರಾಮಾನುಜನ್ನರ ಪ್ರತಿಭೆ ಎದ್ದು ಕಾಣುತ್ತಿದ್ದುದು ಅವರ ಸಂಖ್ಯೆಗಳ ವಿಭಾಗಸಿದ್ಧಾಂತ ಮತ್ತು ಅದಕ್ಕೆ ಸಂಬಂಧಿಸಿದ ದೀರ್ಘವೃತ್ತಿಯ ಉತ್ಪನ್ನಗಳಲ್ಲಿ ಹಾಗೂ ಅನಂತ ಭಿನ್ನರಾಶಿಗಳಲ್ಲಿ ಎಂದು ಹಾರ್ಡಿ ಅಭಿಪ್ರಾಯಪಟ್ಟಿದ್ದರು. 
 (ಬಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ